ಆಗ್ಸ್‍ಬರ್ಗ್ ಒಕ್ಕೂಟ

ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಯೂರೋಪಿನ ಅತ್ಯಂತ ಪ್ರತಿಭಾಶಾಲಿ ದೊರೆಯಾಗಿದ್ದ ಫ್ರಾನ್ಸಿನ ಹದಿನಾಲ್ಕನೆಯ ಲೂಯಿ, ಪರಮ ಪ್ರಭುವಾಗಬೇಕೆಂಬ ಆಸೆಯಿಂದ ಮಧ್ಯ ಯೂರೋಪಿನ ರಾಷ್ಟ್ರಗಳ ಮೇಲೆ ನುಗ್ಗಬಹುದೆಂಬ ಭಯವುಂಟಾದಾಗ, ಆಸ್ಟ್ರಿಯದ ಚಕ್ರವರ್ತಿ ಮೊದಲನೆಯ ಲಿಯೋಪಾಲ್ಡ್ ಲೂಯಿಯ ಧಾಳಿಯನ್ನೆದುರಿಸುವುದಕ್ಕೆ ಮಧ್ಯ ಯೂರೋಪಿನ ರಾಜ್ಯಗಳನ್ನೆಲ್ಲ ಒಟ್ಟುಗೂಡಿಸಿ 1686ರಲ್ಲಿ ಈ ಕೂಟವನ್ನೇರ್ಪಡಿಸಿದ. ಮಧ್ಯ ಯೂರೋಪಿನಲ್ಲಿ ತಮಗೂ ಸೇರಿದ್ದ ಪ್ರಾಂತ್ಯಗಳಿದ್ದುದರಿಂದ ಸ್ಪೇನ್ ಮತ್ತು ಸ್ವೀಡನ್ ಕೂಡ ಈ ಒಕ್ಕೂಟಕ್ಕೆ ಸೇರಿದುವು. ಒಕ್ಕೂಟವೇರ್ಪಟ್ಟುದರಿಂದ ಯುದ್ಧವೇನೂ ನಡೆಯಲಿಲ್ಲ. ಎರಡು ವರ್ಷ ಕಳೆದ ಮೇಲೆ ಫ್ರಾನ್ಸಿನ ಸೈನ್ಯಗಳು ಪ್ಯಾಲಟಿನೇಟ್ ಪ್ರಾಂತ್ಯಕ್ಕೆ ನುಗ್ಗಿದಾಗ ಕೆಲವುರಾಜ್ಯಗಳು ಈ ಒಕ್ಕೂಟವನ್ನು ತ್ಯಜಿಸಿದ್ದುವು. ಇಂಗ್ಲೆಂಡ್, ಸವಾಯ್, ಡಚ್, ನೆದರ್‍ಲೆಂಡ್ಸ್ ಹೊಸದಾಗಿ ಸೇರಿಕೊಂಡುವು. ಆಗ ಈ ಒಕ್ಕೂಟಕ್ಕೆ ಮಹಾರಾಷ್ಟ್ರಕೂಟ (ಗ್ರಾಂಡ್ ಅಲೈಯನ್ಸ್) ಎಂದು ಹೆಸರಾಯಿತು. ಮುಂದೆ ನಡೆದ ಯುದ್ಧಕ್ಕೆ ಆಗ್ಸ್‍ಬರ್ಗ್ ಒಕ್ಕೂಟದ ಸಮರ ಎಂದು ಕೆಲವರು ಹೆಸರು ಕೊಟ್ಟಿದ್ದಾರೆ. ಅದನ್ನು ಮಹಾರಾಷ್ಟ್ರಕೂಟ ಸಮರ ಎಂದು ಕರೆಯುವುದು ಹೆಚ್ಚು ಸಮಂಜಸ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ